ನಾಥಮುನಿ -
ಸು. ಹತ್ತನೆಯ ಶತಮಾನ. ಶ್ರೀವೈಷ್ಣವ ಪಂಥದ ಪ್ರಥಮ ಆಚಾರ್ಯರಾದ ಇವರು ಘನವಿದ್ವಾಂಸರು ಹಾಗೂ ಮಹಾಭಕ್ತರು. ಇದರ ಪೂರ್ಣ ಹೆಸರು ರಂಗನಾಥ ಮುನಿ. ಇವರು ತಮಿಳುನಾಡಿನ ವೈಷ್ಣವ ಸಂತರಾದ ಆಳ್ವಾರರ ಪ್ರಬಂಧಗಳನ್ನು ಕ್ರೋಢೀಕರಿಸಿದರು. ನಾಲಾಯರ ಪ್ರಬಂಧಗಳೆನಿಸಿದ ಆಳ್ವಾರರ ಸೂಕ್ತಿಗಳನ್ನು ಪ್ರಚಾರ ಮಾಡಿದರು. ಇವರ ನಂತರ ಬಂದವರು ಯಾಮುನರು ಮತ್ತು ರಾಮಾನುಜರು. ಶ್ರೀರಂಗದ ದೇವಸ್ಥಾನದಲ್ಲಿ ಇವರು ಆಚಾರ್ಯರೆಂದು ಅಭಿಷಿಕ್ತರಾದರು. ಇವರು ಯೋಗರಹಸ್ಯ ಮತ್ತು ನ್ಯಾಯತತ್ತ್ವ ಎಂಬ ಎರಡು ಗ್ರಂಥಗಳನ್ನು ಬರೆದರೆಂದು ಪ್ರತೀತಿ. ಯೋಗರಹಸ್ಯ ಈಗ ಲುಪ್ತವಾಗಿದೆ. ಆದರೆ, ಅದರ ಕೆಲವು ವಾಕ್ಯಗಳನ್ನು ವೇದಾಂತ ದೇಶಿಕರು ಉಲ್ಲೇಖಿಸಿದ್ದಾರೆ. ಇವರ ನ್ಯಾಯತತ್ತ್ವ ವಿಶಿಷ್ಟಾದ್ವೈತ ಸಿದ್ದಾಂತದ ಮೊದಲ ಗ್ರಂಥ. ಶ್ರೀವೈಷ್ಣವ ಪಂಥದಲ್ಲಿ ಪ್ರಮುಖವೆನಿಸಿರುವ ಪ್ರಪತ್ತಿ ಸಿದ್ಧಾಂತವನ್ನು ಇವರು ಮೊದಲಿಗೆ ಪ್ರತಿಪಾದಿಸಿದರು. ಇವರು ಶ್ರೀವೈಷ್ಣವರನ್ನು ಸಂಘಟಿಸಿದುದಲ್ಲದೆ ಆಳ್ವಾರರ ಪ್ರಬಂಧಗಳನ್ನು ರಾಗಗಳಿಗೆ ಜೋಡಿಸಿ ಅವನ್ನು ದೇವಸ್ಥಾನಗಳಲ್ಲಿ ಹಾಡುವ ಏರ್ಪಾಡು ಮಾಡಿದರು.
(ಎಂ.ವೈ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ